ದೀರ್ಘಾಯುಸ್ಸು
 ನಿಗದಿಯಾದ ಆಯುಸ್ಸನ್ನು ಹೆಚ್ಚು ಕಡಿಮೆ ಪೂರ್ಣವಾಗಿ ಬದುಕಿ ಬಾಳುವ ಸನ್ನಿವೇಶ (ಲಾಂಗಿವಿಟಿ). ಜೀವಿಗಳಿಗೆಲ್ಲ ಆಯುಸ್ಸು ನಿಗದಿಯಾಗಿದೆ ಎಂದು ಹೇಳಬಹುದು. ಮಾನವನ ಬಗ್ಗೆ ಹೇಳುವುದಾದರೆ, ಜನಿಸಿದಾಗ ಅಥವಾ ಜನಿಸಿದ ಕೆಲವೇ ಗಂಟೆಗಳಲ್ಲಿ ಅಸು ನೀಗುವವರು ಕೆಲವರು, ಇವರದು ಅಲ್ಪಾಯುಸ್ಸು, ಮತ್ತೆ ಕೆಲವರು 80 - 90 ವರ್ಷಗಳ ತುಂಬು ಬಾಳ್ವೆಯ ಬಳಿಕ ಮಡಿಯುವವರು. ಇವರದು ದೀರ್ಘಾಯುಸ್ಸು. ಒಂದೇ ದಿನ ಹುಟ್ಟಿದ 1000 ಶಿಶುಗಳನ್ನು ಗಣನೆಗೆ ಒಳಪಡಿಸಿ ಪ್ರತಿ ವ್ಯಕ್ತಿಯೂ ಎಷ್ಟು ಕಾಲ ಬದುಕಿರುತ್ತಾನೆ ಎಂದು ಅಂದಾಜುಮಾಡುತ್ತ ಕಡೇ ವ್ಯಕ್ತಿ ಸಾಯುವ ತನಕ ಲೆಕ್ಕ ಹಾಕಿ, ಇವುಗಳ ಸರಾಸರಿ ಕಂಡುಹಿಡಿದು ಸಂಖ್ಯಾಕಲನಶಾಸ್ತ್ರಜ್ಞರು ಮಾನವ ಹುಟ್ಟಿದ ದಿನದ ಸರಾಸರಿ ಆಯುರ್ನಿರೀಕ್ಷೆ (ಆವರೇಜ್ ಲೈಫ್‍ಸ್ಪ್ಯಾನ್) ಅಂದಾಜು ಮಾಡಬಲ್ಲರು. ಭಾರತದ ಶಿಶುಮರಣ ಪ್ರಮಾಣ 1 : 10. ಅಂದರೆ ಜೀವದೊಂದಿಗೆ ಹುಟ್ಟಿದ 1000 ಶಿಶುಗಳಲ್ಲಿ 100 ಮಕ್ಕಳು ತಮ್ಮ ಮೊದಲ ಹುಟ್ಟಿದ ಹಬ್ಬವನ್ನೂ ಸಹ ಕಾಣಲಾರವು. ಮುಂದುವರೆದ ದೇಶಗಳಲ್ಲಿ ಶಿಶುಗಳ ಮರಣದ ಪ್ರಮಾಣ ಕೇವಲ 18.22 : 1000 ಮಾತ್ರ. ಇದರಿಂದಾಗಿ ಭಾರತ ದೇಶದ ಸರಾಸರಿ ಆಯುರ್ನಿರೀಕ್ಷೆ 53 . 2 ವರ್ಷಗಳು. ಮುಂದುವರಿದ ರಾಷ್ಟ್ರಗಳಲ್ಲಿ ಇದು 60 - 70 ವರ್ಷಗಳು. ಈ ಸರಾಸರಿ ಆಯುರ್ನಿರೀಕ್ಷೆಗೆ ಮೇಲ್ಪಟ್ಟು ಬದುಕಿರುವವರಗೆ ದೀರ್ಘಾಯುಗಳು ಎಂದು ಹೇಳುವುದೂ ಉಂಟು. ಚಿಕ್ಕ ಕ್ರಿಮಿಕೀಟಗಳ ಆಯುಸ್ಸು ಆಮೆಯ ಆಯುಸ್ಸಿಗಿಂತ ಕಡಿಮೆ. ಅಂದಮಾತ್ರಕ್ಕೆ ಆಯುಸ್ಸಿಗೂ ದೇಹದ ಗಾತ್ರಕ್ಕೂ ಸಂಬಂಧ ನಿಖರವಾಗಿ ಕಲ್ಪಿಸಲಾಗದು. ಆದರೆ ಸಸ್ಯವರ್ಗಕ್ಕೆ ಸೇರಿದ ಒಂದು ಹೆಮ್ಮರವನ್ನು ಕೆಡವಿ ಕತ್ತರಿಸಿ ನೋಡಿದರೆ ಅದರ ಕಾಂಡದಲ್ಲಿ ಅನೇಕ ವೃತ್ತಗಳನ್ನು ಗಮನಿಸಬಹುದು. ಪ್ರತಿಯೊಂದು ವೃತ್ತವೂ ಒಂದು ವರ್ಷ ಅವಧಿಯನ್ನು ಸೂಚಿಸುತ್ತದೆ. ಇದರಿಂದ ಗಾತ್ರಕ್ಕೂ ಆಯುಸ್ಸಿಗೂ ಸಂಬಂಧವಿದೆ ಎಂದಂತಾಯಿತು. ಈ ರೀತಿ 1335 ವೃತ್ತಗಳಿರುವ ಬೃಹತ್ಕಾಂಡದ ಹೆಮ್ಮರ ಇಂಗ್ಲೆಂಡಿನ ದಕ್ಷಿಣ ಕೆನ್‍ಸಿಂಗ್ಟನಿನ ಸಂಗ್ರಹಾಲಯದಲ್ಲಿದೆ. 
ಏಕಕೋಶಿಯಾದ (ಪ್ರೋಟೊeóÉೂೀವಾ) ಅಮೀಬ ಇಬ್ಭಾಗವಾಗಿ ಒಂದೊಂದೂ ತನ್ನ ಜೀವನವನ್ನು ಸ್ವತಂತ್ರವಾಗಿ ಹೊಸದಾಗಿ ಪ್ರಾರಂಭಿಸುತ್ತದೆ. ಅಮೀಬಕ್ಕೆ ನೈಸರ್ಗಿಕ ಸಾವೇ ಇಲ್ಲ. ಅಕಸ್ಮಾತ್ ಘಾತದಿಂದ ನಾಶವಾಗಿ ಹೋಗಬೇಕು, ಅಷ್ಟೇ. ಈ ರೀತಿಯ ನಿರಂತರ ಜೀವಕ್ಕೆ ಇತರ ಮೇಲ್ಮಟ್ಟದ ಪ್ರಾಣಿಗಳಲ್ಲಿ ಅವಕಾಶವಿಲ್ಲ. ಇವುಗಳಲ್ಲಿ ವೃದ್ಧಾಪ್ಯ ಹಾಗೂ ಸಾವು ಇದ್ದೇ ಇವೆ. ಜೀನಿನಲ್ಲಿ ಹಾಯ್ದು ಬಂದ ದೈಹಿಕ ಹಾಗೂ ರಾಸಾಯನಿಕ ಗುಣಗಳನ್ನು ಅನುಸರಿಸಿ ಆಯಾ ಜಾತಿ ಜೀವಿಯ ಆಯುಸ್ಸು ನಿಗದಿಯಾಗುವ ಸಾಧ್ಯತೆ ಉಂಟು. ಮಾನವನ ಆಯುಸ್ಸು 120 ವರ್ಷಗಳು ಎಂದು ಅನೇಕರು ಹೇಳಿದ್ದಾರೆ. 100 ವರ್ಷ ಎಂದು ಸಾಮಾನ್ಯವಾಗಿ ಎಲ್ಲರೂ ಒಪ್ಪಿದ್ದಾರೆ. 

ಮಾನವನ ಜೀವಿತಾವಧಿಗೂ ಸರಾಸರಿ ಆಯುರ್ನಿರೀಕ್ಷೆಗೂ ವ್ಯತ್ಯಾಸವುಂಟು. ಜೀವಿತಾವಧಿ ಜೀವಂತವಾಗಿರಬಲ್ಲ ಆಯುಸ್ಸಿನ ಗರಿಷ್ಠವನ್ನು ಸೂಚಿಸುತ್ತದೆ. ಈ ಅವಧಿ 100 ವರ್ಷಗಳು ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ಎಂದು ಹೇಳಬಹುದು. ಸರಾಸರಿ ಆಯುರ್ನಿರೀಕ್ಷೆಯಾದರೋ ಜೀವಪಟ್ಟಿಗಳಿಂದ ಅಂದಾಜಾದಾವು. ಮಾನವನ ಸರಾಸರಿ ಆಯುರ್ನಿರೀಕ್ಷೆ ಹುಟ್ಟಿದಾಗ ಇದ್ದುದು ಮುಂದೆ ಪ್ರತಿ ಒಂದೊಂದು ವರ್ಷ ತುಂಬಿದ ಅನಂತರವೂ ಆಯಾ ವಯಸ್ಸಿಗೆ ತಕ್ಕಂತೆ ಬದಲಾಗುತ್ತದೆ. ಶತಮಾನಗಳು ಉರುಳಿದರೂ ಮಾನವನ ಜೀವಿತಾವಧಿಯಲ್ಲಿ ಅತ್ಯಲ್ಪ ಬದಲಾವಣೆಯಾಗಬಹುದು. ಆದರೆ ಸರಾಸರಿ ಆಯುರ್ನಿರೀಕ್ಷೆ ಹೀಗಲ್ಲ - ಕಾಲ ಉರುಳಿದಂತೆ ಆರೋಗ್ಯಪ್ರಜ್ಞೆ ಸುಧಾರಿಸಿದಂತೆ ಮತ್ತು ವೈದ್ಯ ವಿಜ್ಞಾನ ಮುಂದುವರಿದಂತೆಲ್ಲ ಉತ್ತಮಗೊಳ್ಳುತ್ತಿದೆ, ಭಾರತದಲ್ಲಿ ಜನಿಸಿದ ಗಂಡು ಶಿಶುವಿನ ಸರಾಸರಿ ಆಯುರ್ನಿರೀಕ್ಷೆ 1910-1911 ರಲ್ಲಿ ಕೇವಲ 23.31 ವರ್ಷಗಳಿದ್ದುದು ಇಂದು (1977) 53.2 ವರ್ಷಗಳಿಗೂ ಹೆಚ್ಚಿದೆ.

ವಿವಿಧ ಜನಾಂಗಗಳ ಆಯುಸ್ಸುಗಳಲ್ಲಿ ವ್ಯತ್ಯಾಸಗಳಿವೆಯೇ ಎಂಬ ಪ್ರಶ್ನೆಗೆ ಸೂಕ್ತ ಉತ್ತರವನ್ನು ಪ್ರಮಾಣಪೂರ್ವಕವಾಗಿ ಕೊಡುವುದು ಕಷ್ಟವಾದರೂ ಪ್ರಪಂಚದ ನಾನಾ ಜನಾಂಗಗಳನ್ನು ಒಂದೇ ರೀತಿಯ ವಾತಾವರಣಕ್ಕೆ ಒಳಪಡಿಸಿದರೆ, ವಿವಿಧ ಜನಾಂಗಗಳಲ್ಲಿ ಆಯುಸ್ಸುಗಳ ವ್ಯತ್ಯಾಸವಿರುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಹೆಂಗಸರಿಗೆ ಗಂಡಸರಿಗಿಂತ ಆಯಾ ವಯಸ್ಸಿನ ಆಯುರ್ನಿರೀಕ್ಷೆ ಕಡಿಮೆ. 1968ರ ಅಂಕೆ ಅಂಶಗಳ ಪ್ರಕಾರ ಗಂಡು ಶಿಶುವಿನ ಆಯುರ್ನಿರೀಕ್ಷೆ 53.2 ವರ್ಷಗಳಾದರೆ, ಹೆಣ್ಣುಶಿಶುವಿನ ಆಯುರ್ನಿರೀಕ್ಷೆ 51.9 ವರ್ಷಗಳು. ಈ ವ್ಯತ್ಯಾಸ ಶೈಶವಾವಸ್ಥೆಯೊಂದರಲ್ಲೇ ಅಲ್ಲದೆ ಇತರ ವಯಸ್ಸುಗಳಲ್ಲೂ ಕಂಡು ಬರುತ್ತದೆ. ಗ್ರಾಹಮ್‍ಬೆಲ್ ಎಂಬಾತ 17 ನೆಯ ಶತಮಾನದಿಂದ ಈಚೆಗೆ ಹುಟ್ಟಿದ 8,972 ವ್ಯಕ್ತಿಗಳ ಮರಣ ವಯಸ್ಸುಗಳನ್ನು ವಿಮರ್ಶಿಸಿ ಅಧ್ಯಯನ ಮಾಡಿದ. 9-10 ಹಾಗೂ ಅದಕ್ಕಿಂತ ಕಡಿಮೆ ಮಕ್ಕಳು ಇರುವ ಕುಟುಂಬಗಳಲ್ಲಿ ದೀರ್ಘವಯಸ್ಕರ ಪ್ರಮಾಣ ಹೆಚ್ಚಿರುತ್ತದೆ. ಹಾಗೂ 9 - 10 ಮಿಗಿಲಾಗಿರುವ ಸಂಸಾರಗಳಲ್ಲಿ ದೀರ್ಘವಯಸ್ಕರ ಪ್ರಮಾಣ ಇಳಿಮುಖವಾಗುತ್ತದೆಂಬುದನ್ನು ಅವನು ಗಮನಿಸಿದ್ದಾನೆ. ಮೊದಲು ಹುಟ್ಟಿದ ಮಕ್ಕಳ ಆಯುಸ್ಸು ಮತ್ತೆ ಹುಟ್ಟಿದ ಮಕ್ಕಳಷ್ಟೇ ಇತ್ತು. ತಂದೆಯಾಯಿಯರ ಆ ಅವಧಿಗೆ ಮೊದಲು ಅಥವಾ ಅನಂತರ ಜನಿಸಿದವರಿಗಿಂತ ಹೆಚ್ಚಿತ್ತು.

ವ್ಯಕ್ತಿಯ ಆಯುಸ್ಸಿನ ಮೇಲೆ ಪ್ರಭಾವ ಬೀರುವ ಎರಡು ಮುಖ್ಯ ಅಂಶಗಳೆಂದರೆ ಆತನ ವಂಶ ಹಾಗೂ ಆತ ಬಾಳಿಬದುಕುವ ಪರಿಸರ. ಇವೆರಡನ್ನೂ ಬೇರ್ಪಡಿಸಿ ಒಂದೊಂದರ ಪ್ರಭಾವವನ್ನೂ ಬೇರೆಯಾಗಿ ಪರಿಶೀಲಿಸಲು ಸಾಧ್ಯವಾಗಲಾರದು. ದೀರ್ಘಾಯುಸ್ಸು ವಂಶಪಾರಂಪರ್ಯವಾಗಿ ಸಾಗುತ್ತದೆಂಬುದು ಲಕ್ಷ್ಯಕ್ಕೆ ಬಂದಿದೆ. ಈ ವಿಚಾರದಲ್ಲಿ ಸಾಕಷ್ಟು ಅಧ್ಯಯನಗಳು ನಡೆದು ಆಧಾರಗಳೂ ದೊರೆತಿವೆ. ಆನುವಂಶಿಕವಾಗಿ ಚೈತನ್ಯ (ವೈಟ್ಯಾಲಿಟಿ) ಒಂದೇ ಅಲ್ಲದೆ ಅನೇಕ ವೇಳೆ ದುಶ್ಚಟಗಳೂ ಅನಾರೋಗ್ಯಕರ ಪರಿಸರಗಳೂ ಅದರೊಂದಿಗೆ ಕಾಣಬಹುದು. ಇವನ್ನು ನಿವಾರಿಸಲು ಸಾಧ್ಯ. ದುಶ್ಚಟಗಳಿರುವವರ ಮತ್ತು ಅನಾರೋಗ್ಯಕರ ಪರಿಸರಗಳಲ್ಲಿ ವಾಸಿಸುವ ಪೈಕಿ ಅನೇಕರು ದೀರ್ಘಾಯುಗಳಾಗಿರಬಹುದು. ಇದರ ಕಾರಣ ಅವರ ಆನುವಂಶಿಕ ಪ್ರಭಾವ ಎಂದು ಹೇಳುವವರಿದ್ದಾರೆ. ಆನುವಂಶಿಕ ಚೈತನ್ಯವನ್ನು ನಿಶ್ಚಯಿಸಲು ವೈದ್ಯರು ವ್ಯಕ್ತಿಯ ನರಮಂಡಲ, ಹೃದಯ, ರಕ್ತಪರಿಚಲನೆ ಇತ್ಯಾದಿ ಮುಖ್ಯಾಂಶಗಳನ್ನು ಪರಿಶೀಲಿಸುತ್ತಾರೆ. ಕೆಲವು ವಂಶಗಳಲ್ಲಿ ಕೇವಲ 50-60 ವಯಸ್ಸು ತುಂಬುವ ಮುನ್ನ ಹೃದಯಾಘಾತ, ಲಕ್ವ ಇತ್ಯಾದಿ ರೋಗಗಳಿಗೆ ಬಲಿಯಾಗುತ್ತಾರೆ.

ಬಾಹ್ಯ ಪರಿಸರದ ಪ್ರಭಾವ ಮಾನವನ ಆಯುಸ್ಸಿನ ಮೇಲೆ ಇದ್ದೇ ಇದೆ. ಉಷ್ಣವಲಯದವರ ಆಯುಸ್ಸಿಗಿಂತ ಸಮಶೀತೋಷ್ಣವಲಯದವರ ಸರಾಸರಿ ಆಯುಸ್ಸು ಹೆಚ್ಚಿಗೆ. ನಗರಗಳ ಕೊಳಚೆ ಪ್ರದೇಶಗಳಲ್ಲಿ ನೆಲೆಸಿರುವವರ ಆಯುಸ್ಸು ಕಡಿಮೆ. ಈ ಪ್ರದೇಶಗಳಲ್ಲಿ ರೋಗ ತಾಂಡವವಾಡುವುದು ಎಲ್ಲರ ಲಕ್ಷ್ಯವನ್ನೂ ಸೆಳೆದಿದೆ. ಇಲ್ಲೂ ದೀರ್ಘಾಯುಗಳು ಇದ್ದಾರೆ. ಇವರ ಪೈಕಿ ಬಹುಮಂದಿ ರೋಗಗಳನ್ನು ಅನುಭವಿಸಿ ಅವನ್ನು ಎದುರಿಸಲು ಸಾಮಥ್ರ್ಯ ಸಂಪಾದಿಸಿದವರೇ ಆಗಿರುತ್ತಾರೆ. ಹಣವಂತರಲ್ಲಿ ಮತ್ತು ಬಾಹ್ಯ ಪರಿಸರ ಉತ್ತಮವಾಗಿರುವ ಕಡೆ ವಾಸಿಸುವವರಲ್ಲಿ ಕಂಡುಬರುವ ರೋಗಗಳೇ ಬೇರೆ. ಮಧುಮೇಹ, ಹೃದಯನಾಡಿಗಳ ವಿಕಾರ, ರಕ್ತ ಒತ್ತಡದೇರಿಕೆ, ಏಡಿಗಂತಿ ಮುಂತಾದ ರೋಗಗಳು ಹಣವಂತರಲ್ಲಿ ಅಧಿಕ. ಇವೂ ಮಾರಕ ರೋಗಗಳೇ. ಆದರೂ ಈ ಗುಂಪಿನ ಜನರ ಆಯುಸ್ಸು ಹೆಚ್ಚು.

ಭಾರತದಲ್ಲಿ ಮಲೇರಿಯ ರೋಗ ಕಡಿಮೆಯಾದಂತೆ ಜನಗಳ ಆಯುಸ್ಸು ವೃದ್ಧಿಯಾದದ್ದೇ ಅಲ್ಲದೆ ಜನಗಳಲ್ಲಿ ಚೈತನ್ಯ ಹೆಚ್ಚಿ ಮನೋದಾಢ್ರ್ಯ ಉತ್ತಮಗೊಂಡಿದೆ. ರೋಗರುಜಿನಾದಿಗಳಿಂದ ಮುಪ್ಪು ಉಂಟಾಗುವುದಕ್ಕಿಂತ ಸೋಮಾರಿತನ ಜಡತ್ವಗಳೇ ಮುಪ್ಪಿನ ಮೂಲಕಾರಣವಾಗುವ ಸಾಧ್ಯತೆಯನ್ನೂ ತಜ್ಞರು ಪರಿಶೀಲಿಸಿದ್ದಾರೆ. ಅನೇಕ ಮಂದಿ ಸತತ ದುಡಿಮೆಯಿಂದಾಗಿ ತಮ್ಮ ವೃದ್ಧಾಪ್ಯವನ್ನು ಮುಂದೂಡಿದ್ದಾರೆಂಬ ಅಭಿಪ್ರಾಯವೂ ಉಂಟು.

ನಾವು ತಿನ್ನುವ ಆಹಾರಕ್ಕೂ ಆಯುಸ್ಸಿಗೂ ಸಂಬಂಧವಿದೆಯೇ? ಸತ್ತ್ವಾಂಶ ಪರಿಪೂರ್ಣವಾದ ಆಹಾರವೇ ಆಗಲಿ ಅವನ್ನು ಮಿತಿಯಿಲ್ಲದೆ ತಿಂದರೆ ದೇಹದ ಸಂಪನ್ಮೂಲ ಶೀಘ್ರವಾಗಿ ಕಳೆದು ಚಯಾಪಚಯಾತ್ಮಕ ರೋಗಗಳು ಉಂಟಾಗುತ್ತವೆ. ಮಧುಮೇಹ, ರಕ್ತ ಒತ್ತಡವೇರಿಕೆ ಇತ್ಯಾದಿ ರೋಗಗಳು ಈ ಉದಾಹರಣೆಗಳು. ಒಂದನೆಯ ಮಹಾಯುದ್ಧ ಕಾಲದಲ್ಲಿ ಆಹಾರದ ಪಡಿತರ ಜಾರಿಗೆ ಬಂತು. ಆ ವೇಳೆ ಅನೇಕ ರೋಗಗಳ ಅದರಲ್ಲಿಯೂ ಮಧುಮೇಹ ಜಾಡ್ಯ ಕಡಿಮೆಯಾದದ್ದು ಕಂಡುಬಂತು. ಅನೇಕ ಶತಾಯುಗಳು ಮಿತಾಹಾರಿಗಳು ಎಂಬುದಕ್ಕೆ ಆಧಾರಗಳಿವೆ. ಮಿತಿಮೀರಿದ ಮಾದಕದ್ರವ್ಯಗಳ ಸೇವನೆ ಹಾಗೂ ಇತರ ದುಶ್ಚಟಗಳಿಂದ ಆಯುಸ್ಸು ಮೊಟಕಾಗುತ್ತದೆ ಎಂದು ಹೇಳಬಹುದು. ಆಯುಸ್ಸು ಹೆಚ್ಚಿದಷ್ಟೂ ಆರೋಗ್ಯವೆಂದು ಹೇಳಬಹುದೇ? ಕೇವಲ ಆಯುಸ್ಸೊಂದೇ ಇದ್ದರೆ ಸಾಲದು.  ಜೊತೆಗೆ ಆರೋಗ್ಯ ಹಾಗೂ ಚೈತನ್ಯವಿದ್ದು ಬಾಳಬೇಕು. ಸ್ವಾಭಾವಿಕ ವೃದ್ಧಾಪ್ಯದಲ್ಲಿ ಕ್ರಮೇಣ ಶರೀರ ಕ್ರಿಯೆ ಕುಗ್ಗುತ್ತ ಬರುತ್ತದೆ. ಇದಕ್ಕೆ ಅಂಗಾಂಗಗಳ ಊತಕಗಳು ಸೊರಗಿ ಚಟುವಟಿಕೆ ಸ್ಥಗಿತಗೊಳ್ಳವುದೇ ಕಾರಣವೆಂದು ಹೇಳಬಹುದು. ಸ್ವಾಭಾವಿಕ ವೃದ್ಧಾಪ್ಯ ಕಾಲಿಡುವ ಲಕ್ಷಣಗಳು ಕೆಲವು. ಅವುಗಳ ಪೈಕಿ ಮುಖ್ಯವೆಂದರೆ ರತಿಯಾಸೆ ಕಡಿಮೆಯಾಗುವುದು; ಶಾಂತಚಿತ್ತತೆ, ತಾಳ್ಮೆ ವ್ಯಕ್ತಿಯಲ್ಲಿ ಮೂಡುವುದು; ತತ್ತ್ವವೇದಾಂತ ವಿಚಾರಗಳಲ್ಲಿ ಆಸಕ್ತಿ ಹೆಚ್ಚುವುದು; ದೈಹಿಕ ಚಟುವಟಿಕೆಗಳು ಕುಗ್ಗಿ ಬೇಗ ಆಯಾಸ ಕಾಣಿಸಿಕೊಳ್ಳುವುದು; e್ಞÁಪಕ ಶಕ್ತಿ ಕಡಿಮೆಯಾಗುವುದು; ನಡಿಗೆ, ಚಲನ, ವಲನಗಳಲ್ಲಿ ಪ್ರಯಾಸ ಹಾಗೂ ಎಡವಟ್ಟು; ವ್ಯಕ್ತಿಯ ಮನೋಭಾವಗಳಲ್ಲಿ ವಿಪರ್ಯಾಸ. ಊತಕ ಸೊರಗುವುದರಿಂದ ನಿರ್ನಾಳಗ್ರಂಥಿಗಳ ಸ್ರಾವ ಕಡಿಮೆಯಾಗುತ್ತ ಬರುತ್ತದೆ. ಥೆರಾಯಿಡ್ ಮತ್ತು ವೃಷಣಗಳು ಹೆಚ್ಚು ಪ್ರಭಾವ ಬೀರಬಹುದೆಂಬ ಅಭಿಪ್ರಾಯವಿದೆ. ಸ್ವಾಭಾವಿಕ ಮುಪ್ಪಿಗೂ ರೋಗಗಳ ಪರಿಣಾಮವಾಗಿ ಪ್ರಾಪ್ತಿಯಾದ ಮುಪ್ಪಿಗೂ ವ್ಯತ್ಯಾಸಗಳನ್ನು ನಿಖರವಾಗಿ ಹೇಳುವುದು ಕಷ್ಟ. ರೋಗಾನುಭವವಿಲ್ಲದೆ ಕೇವಲ ಮುಪ್ಪೊಂದೇ ಪ್ರಾಪ್ತವಾಗುವ ಸಂಭವ ಅಪರೂಪ. ಮುಪ್ಪೇ ಒಂದು ರೀತಿಯ ರೋಗ ಎನ್ನುವವರು ಇದ್ದಾರೆ.

ಮೆಚ್ನಿಕೊ ಎಂಬಾತ ಮುಪ್ಪಿನ ಲಕ್ಷಣಗಳನ್ನು ನಮ್ಮ ದೊಡ್ಡಕರಳುಗಳಲ್ಲಿ ಉತ್ಪತ್ತಿಯಾಗುವ ರೋಗ ತರುವ ಕೆಲವು ಏಕಾಣು ಜೀವಿಗಳ ವಿಷದ ಪ್ರಭಾವವೆಂದೂ ಆದ್ದರಿಂದ ಇದನ್ನು ತಪ್ಪಿಸುವುದು ಸಾಧ್ಯವೆಂದು ನಂಬಿದ್ದ. ಆದರೆ ಇದನ್ನು ಎಲ್ಲರೂ ಒಪ್ಪುವುದಿಲ್ಲ. ರೋಗಗಳ ಅನುಭವದಿಂದ ಜಾಗ್ರತೆ ಮುಪ್ಪಿಗೆ ಈಡಾಗುವುದು ತಿಳಿದ ವಿಚಾರ. ಕೆಲವೊಂದು ವೇಳೆ ಬಾಲ್ಯಾವಸ್ಥೆಯಲ್ಲಿಯೇ ಮುಪ್ಪಿನ ಲಕ್ಷಣ ಕಂಡುಬಂದಿರುವ ನಿದರ್ಶನಗಳೂ ಉಂಟು. ದೇಹದ ಅಂಗಾಂಗಗಳಿಗೆ ಒಂದೇ ವೇಳೆ ಮುಪ್ಪಡರುವುದಿಲ್ಲ. ಉದಾಹರಣೆಗೆ ಜೀವಾದಾರದ ಅಂಗಗಳಾದ ಹೃದಯ ಮತ್ತು ಮಿದುಳುಗಳಲ್ಲಿ ಮುಪ್ಪು ಬೇಗ ಮುಂದುವರಿಯುತ್ತದೆ. ಇದರಿಂದ ಅಂಗಾಂಗಗಳ ತಾಳ ಮೇಳಗಳಲ್ಲಿ ಏರುಪೇರುಗಳಾಗಿ ದೇಹಕ್ರಿಯೆಗಳಲ್ಲಿ ಊನವುಂಟಾಗುತ್ತದೆ. ಹೀಗಾದರೆ ಸ್ವಾಭಾವಿಕ ಮುಪ್ಪಿನ ಬದಲು ಅಸ್ವಾಭಾವಿಕ ಮುಪ್ಪಿಗೆ ಎಡೆ ಕೊಟ್ಟಂತಾಗುವುದು. ವ್ಯಕ್ತಿಗೆ ಜೀವನದಲ್ಲೇ ಬೇಸರ ಹುಟ್ಟಿ, ಕಷ್ಟ ಸಂಕಟಗಳಿಗೆ ಈಡಾಗುತ್ತಾನೆ. ಕೆಲವು ರೋಗಗಳು, ವೃದ್ಧಾಪ್ಯದ ರೋಗಗಳು, ಉದಾಹರಣೆಗೆ ಮಧುಮೇಹ, ಏಡಿಗಂತಿ, ಹೃದಯ ರಕ್ತನಾಳಗಳ ಹಾಗೂ ಮೂತ್ರಪಿಂಡಗಳ ರೋಗಗಳು ಈ ಗುಂಪಿಗೆ ಸೇರಿದವು. ಸಿಡುಬು, ದಡಾರ, ಗಂಟಲುಮಾರಿ ಇತ್ಯಾದಿ ಕೆಲವು ರೋಗಗಳು ವೃದ್ಧಾಪ್ಯದಲ್ಲಿ ಅಪರೂಪ. ಇವು ಮಕ್ಕಳ ರೋಗಗಳೆಂದು ಹೇಳಬಹುದು. ಆದರೆ ನ್ಯೂಮೋನಿಯ ಎಂಬ ಶ್ವಾಸಕೋಶರೋಗ ಮಕ್ಕಳಲ್ಲಿ ಹಾಗೂ ವೃದ್ಧರಲ್ಲಿ ಕಾಣಿಸಿಕೊಂಡು ಆಹುತಿ ತೆಗೆದುಕೊಳ್ಳಬಹುದು. ವೃದ್ಧಾಪ್ಯವನ್ನು ತಪ್ಪಿಸಲು ಸಾಧ್ಯವಿಲ್ಲ. ವೃದ್ಧಾಪ್ಯವನ್ನು ರಕ್ಷಿಸಿ ಆದಷ್ಟು ಮುಂದುವರಿಯದಂತೆ ತಡೆದು ದೀರ್ಘಾಯುಸ್ಸನ್ನು ಪಡೆಯುವುದು ಆಧುನಿಕ ವೈದ್ಯವಿe್ಞÁನದ ಹಂಬಲ. 					(ಆರ್.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ